ಬೆಂಗಳೂರು, ಜುಲೈ 02 : ಭಾರಿ ಗಾತ್ರದ ಬಂಡೆಯೊಂದು ಕುಸಿದು ಬಿದ್ದ ಪರಿಣಾಮ ಅದರಡಿಯಲ್ಲಿ ಕೆಲಸ ಮಾಡುತ್ತಿದ್ದ 7 ಕಾರ್ಮಿಕರು ದಾರುಣವಾಗಿ ಮೃತ ಪಟ್ಟ ಘಟನೆ ಬೆಂಗಳೂರಿನ ರಾಮನಗರದಲ್ಲಿ ಸಂಭವಿಸಿದೆ.
ದುರ್ಘಟನೆಯಲ್ಲಿ ಅನೇಕರು ಸಿಲುಕಿಕೊಂಡಿರುವ ಶಂಕೆ ಕೂಡ ವ್ಯಕ್ತವಾಗಿದೆ. ತಾವರೆಕರೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾದಪಟ್ಟಣ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ತಾವರೆಕರೆ ಮಾದಪಟ್ಟಣ ಗ್ರಾಮದಲ್ಲಿನ ಕಲ್ಲು ಕ್ವಾರಿ ಒಂದರಲ್ಲಿ ಈ ದುರ್ಘಟನೆ ಸಂಭವಿಸಿದೆ. ಇಂದು ಬೆಳಗ್ಗೆ 7.30ರ ಸುಮಾರಿಗೆ ಈ ಘಟನೆ ನಡೆದಿದೆ. ಎಂದಿನಂತೆ ಕೆಲಸ ಮಾಡ್ತಿದ್ದ ಕಾರ್ಮಿಕರ ಪಾಲಿಗೆ ಬಂಡೆ ಯಮನಾಗಿ ಬಂದಿದೆ. ಇಟಾಚಿಯಲ್ಲಿ ಕೆಲಸ ಮಾಡುವಾಗ ಬಂಡೆ ಕೆಳಗೆ ಬಿದ್ದಿದ್ದು, ಕಾರ್ಮಿಕರ ಮೇಲೆಯೇ ಬಿದ್ದು ಭಾರೀ ದುರಂತ ಸಂಭವಿಸಿದೆ. ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ, ಅಧಿಕಾರಿಗಳು ದೌಡಾಯಿಸಿದ್ದು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.