BREAKING
ರಾಜ್ಯ
ದೇಶ
ವಿದೇಶ
ಕ್ರೀಡೆ
ಸಿನಿಮಾ
ಉಡುಪಿ
ದೇಶ

ನವವಿವಾಹಿತೆ ಆಕೃತಿ ಅನುಮಾನಾಸ್ಪದ ಸಾವು ಪ್ರಕರಣದಲ್ಲಿ ಮಹತ್ವದ ತಿರುವು,ಸಾವಿಗೂ ಮುನ್ನ ಸಹೋದ್ಯೋಗಿಗಳಿಗೆ ಪಾರ್ಟಿ

 ನವದೆಹಲಿ, ಜುಲೈ 06 :  ನವವಿವಾಹಿತೆ ಆಕೃತಿ ಅನುಮಾನಾಸ್ಪದ ಸಾವು ಪ್ರಕರಣ ಮಹತ್ವದ ತಿರುವು ಪಡೆದಿದ್ದು ಸಾವಿಗೂ ಮುನ್ನ ಆಕೃತಿ ತಮ್ಮ ಸಹೋದ್ಯೋಗಿಗಳಿಗೆ ಪಾರ್ಟಿ ಆಯೋಜನೆ ಮಾಡಿದ್ದಳು. ಆಕೃತಿ ಸಾವು  ಆತ್ಮಹತ್ಯೆಯಲ್ಲ ಅದೊಂದು ಕೊಲೆ ಎಂದು ಆಕೆಯ ಕುಟುಂಬ ಆರೋಪಿಸಿದೆ.  



ಮೃತ ಆಕೃತಿ ಖಾಸಗಿ ಸಂಸ್ಥೆಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ (Sales Executive) ಆಗಿದ್ದರು. ಏಪ್ರಿಲ್ 24ರಂದು ಮದುವೆಯಾದ ಬಳಿಕ ರಜೆಯಲ್ಲಿದ್ದ ಆಕೃತಿ, ಜು.4ರಂದು ಮೊದಲ ಬಾರಿಗೆ ಕಚೇರಿಗೆ ಹಾಜರಾಗಿದ್ದರು. ಕೆಲಸಕ್ಕೆ ಮರಳಿದ ಸಂತಸದಲ್ಲಿ ಸಹೋದ್ಯೋಗಿಗಳಿಗಾಗಿ ಸಣ್ಣ ಪಾರ್ಟಿಯನ್ನೂ ಆಯೋಜಿಸಿದ್ದರು ಎನ್ನಲಾಗಿದೆ.

ಸಂಜೆ ಸುಮಾರು 6 ಗಂಟೆ ವೇಳೆಗೆ ಕಚೇರಿಯ ಪಾರ್ಟಿ ಯಶಸ್ವಿಯಾಗಿ ನಡೆದಿದ್ದು, ತಾನು ಮನೆಗೆ ಹಿಂದಿರುಗುತ್ತಿರುವುದಾಗಿ ಆಕೃತಿ ತನ್ನ ತಾಯಿಗೆ ಕರೆ ಮಾಡಿ ಹೇಳಿದ್ದಾಳೆ. 

ಆದರೆ ರಾತ್ರಿ ಸುಮಾರು 8 ಗಂಟೆಗೆ ಆಕೃತಿಯ ಪತಿ ಅರಸ್ತು ಸಿಕ್ಕಾ ಕುಟುಂಬಕ್ಕೆ ಕರೆ ಮಾಡಿ, ಆಕೃತಿ ಕಾಣೆಯಾಗಿದ್ದಾಳೆ ಎಂದು ಮಾಹಿತಿ ನೀಡಿದ್ದಾನೆ. ಇದಾದ ಸುಮಾರು 90 ನಿಮಿಷಗಳ ಬಳಿಕ, ಲೋಧಿ ಕಾಲೋನಿಯ ಪಾಲಿಕಾ ಕುಂಜ್ ನಿವಾಸಿ ಸಮುಚ್ಚಯದಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಕುಟುಂಬಕ್ಕೆ ತಿಳಿಸಿದ್ದಾರೆ. ಬಳಿಕ ಅದು ಆಕೃತಿಯ ಮೃತದೇಹ ಎಂಬುದು ದೃಢಪಟ್ಟಿದೆ. 
ಆಕೃತಿ ಮನೆ ಪುಷ್ಪ ವಿಹಾರದಲ್ಲಿದ್ದು, ಮನೆಯಿಂದ ಸುಮಾರು 10 ಕಿ.ಮೀ ದೂರದಲ್ಲಿ ಮೃತದೇಹ ಪತ್ತೆಯಾಗಿದೆ. ಆಕೃತಿ ಸಹೋದರ ಅಮಯ್ ಸುತಾರ್, ನನ್ನ ಅಕ್ಕ ಮಾನಸಿಕವಾಗಿ ತುಂಬಾ ದೃಢವಾಗಿದ್ದಳು. ಯಾವುದೇ ಸಂದರ್ಭದಲ್ಲೂ ಆತ್ಮಹತ್ಯೆ ಮಾಡಿಕೊಳ್ಳುವವಳಲ್ಲ. ಕರೆ ಮಾಡಿದಾಗ ಆಕೆಯ ಧ್ವನಿಯಲ್ಲಿ ಯಾವುದೇ ಆತಂಕ ಅಥವಾ ಖಿನ್ನತೆಯ ಲಕ್ಷಣಗಳು ಕಂಡುಬಂದಿರಲಿಲ್ಲ ಎಂದು ಕುಟುಂಬ ಹೇಳಿದೆ. ಇದೇ ಕಾರಣಕ್ಕೆ ಆತ್ಮಹತ್ಯೆಯ ಸಾಧ್ಯತೆಯನ್ನು ಕುಟುಂಬ ಸಂಪೂರ್ಣವಾಗಿ ತಳ್ಳಿಹಾಕಿದೆ. ಆಕೆಯನ್ನು ಯಾರೋ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. 

ಇನ್ನೊಂದೆಡೆ, ಮದುವೆಯಾದ ದಿನದಿಂದಲೇ ಪತಿ ಅರಸ್ತು ಸಿಕ್ಕಾ ಹಾಗೂ ಅವರ ಕುಟುಂಬದವರು 20 ಲಕ್ಷ ರೂ. ವರದಕ್ಷಿಣೆಗಾಗಿ ನಿರಂತರ ಒತ್ತಡ ಹೇರುತ್ತಿದ್ದರು ಎಂದು ಕುಟುಂಬ ಗಂಭೀರ ಆರೋಪ ಮಾಡಿದೆ. ಹಣ ತರುವಂತೆ ಆಗಾಗ ಕಿರುಕುಳ ನೀಡಲಾಗುತ್ತಿತ್ತು. ಅಲ್ಲದೇ ಹಲವು ಬಾರಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು ಎಂದು ಕುಟುಂಬಸ್ಥರು ದೂರಿದ್ದಾರೆ.ಸಾವಿಗೆ ಎರಡು ದಿನಗಳ ಮುನ್ನ ಪತಿ-ಪತ್ನಿಯ ನಡುವೆ ತೀವ್ರ ಜಗಳವೂ ನಡೆದಿತ್ತು ಎಂದು ಕುಟುಂಬ ತಿಳಿಸಿದೆ. ಎಂಟು ವರ್ಷಗಳ ಪ್ರೀತಿಯ ಬಳಿಕ ಇಬ್ಬರೂ ಮದುವೆಯಾಗಿದ್ದರು. ಆದರೆ ಮದುವೆಯಾದ ಕೆಲವೇ ವಾರಗಳಲ್ಲಿ ವರದಕ್ಷಿಣೆ ವಿಚಾರವಾಗಿ ದಾಂಪತ್ಯದಲ್ಲಿ ಬಿರುಕು ಮೂಡಿತ್ತು ಎಂದು ಕುಟುಂಬ ಆರೋಪಿಸಿದೆ. ಮೃತಳ ಪತಿ ಪ್ರಸ್ತುತ ನಿರುದ್ಯೋಗಿಯಾಗಿದ್ದಾನೆ ಎನ್ನಲಾಗಿದೆ. 

ಪ್ರಕರಣ ಸಂಬಂಧ ದೆಹಲಿ ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ಆರಂಭಿಸಿದ್ದು, ಆತ್ಮಹತ್ಯೆ, ಕೊಲೆ, ವರದಕ್ಷಿಣೆ ಕಿರುಕುಳ ಸೇರಿದಂತೆ ಪ್ರತಿಯೊಂದು ಸಾಧ್ಯತೆಯನ್ನು ಪರಿಶೀಲಿಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಹಾಗೂ ತನಿಖೆಯ ಬಳಿಕವೇ ಆಕೃತಿಯ ಸಾವಿನ ನಿಖರ ಕಾರಣ ಬಹಿರಂಗವಾಗುವ ಸಾಧ್ಯತೆಯಿದೆ. 

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!