BREAKING
ರಾಜ್ಯ
ದೇಶ
ವಿದೇಶ
ಕ್ರೀಡೆ
ಸಿನಿಮಾ
ಉಡುಪಿ
ದಕ್ಷಿಣ ಕನ್ನಡ

Mangaluru ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮಾದರಿಯಾದ 'ಅಕ್ಷರ ವಾಹಿನಿ'ಬಸ್ ಉದ್ಘಾಟನೆ – ಶಾಸಕ ಡಾ. ಭರತ್ ಶೆಟ್ಟಿ

ಮಂಗಳೂರು, ಜುಲೈ 06 :ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಗುರುಪುರ ಸಮೀಪದ ವಾಮಂಜೂರು ತಿರುವೈಲಿನ ದ.ಕ.ಜಿ.ಪಂ ಮಾದರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗೆ ಉದ್ಯಮಿ ರಘು ಸಾಲ್ಯಾನ್ ಅವರು ವಿದ್ಯಾಬೋಧಿನಿ ಎಜ್ಯುಕೇಶನ್ ಟ್ರಸ್ಟ್ ಸಹಕಾರದೊಂದಿಗೆ, ಪತ್ನಿ ಹಾಗೂ ನಿಕಟಪೂರ್ವ ಕಾರ್ಪೊರೇಟರ್ ಹೇಮಲತಾ ಆರ್. ಸಾಲ್ಯಾನ್ ಅವರ ಕೊಡುಗೆಯಾಗಿ ನೀಡಿದ 23 ಲಕ್ಷ ರೂ. ಮೌಲ್ಯದ ನೂತನ ‘ಅಕ್ಷರ ವಾಹಿನಿ’ ಬಸ್‌ನ ಉದ್ಘಾಟನಾ ಕಾರ್ಯಕ್ರಮ ಜುಲೈ 6ರಂದು ನಡೆಯಿತು.


ನೂತನ ಬಸ್‌ಗೆ ಚಾಲನೆ ನೀಡಿ ಉದ್ಘಾಟಿಸಿದ ಮಂಗಳೂರು ನಗರ ಉತ್ತರ ಶಾಸಕ ಡಾ. ಭರತ್ ಶೆಟ್ಟಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಸಮಾಜದ ಸಹಭಾಗಿತ್ವ ಅತ್ಯಂತ ಮಹತ್ವದ್ದೆಂದು ಹೇಳಿದರು. ತಾವು ಕಲಿತ ಶಾಲೆಯನ್ನೇ ಎರಡನೇ ಮನೆ ಎಂದು ಕಂಡುಕೊಂಡಿರುವ ರಘು ಸಾಲ್ಯಾನ್ ಅವರು, ಶಾಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಶಕ್ತಿ ಮೀರಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.


ಶಾಲೆಗೆ ಈಗಾಗಲೇ ಒಂದು ಬಸ್ ಒದಗಿಸಿದ್ದ ರಘು ಸಾಲ್ಯಾನ್, ಇದೀಗ ಎರಡನೇ ಬಸ್‌ನ್ನೂ ಕೊಡುಗೆಯಾಗಿ ನೀಡಿರುವುದು ವಿಶೇಷ. ಖಾಸಗಿ ಶಾಲೆಗಳ ಮಕ್ಕಳಂತೆ ಸರ್ಕಾರಿ ಶಾಲೆಯ ಮಕ್ಕಳೂ ಬಸ್‌ಗಳಲ್ಲಿ ಪ್ರಯಾಣಿಸಬೇಕು, ಸಮವಸ್ತ್ರದ ಜೊತೆಗೆ ಬಣ್ಣದ ಜೆರ್ಸಿ ಧರಿಸಿ ಆತ್ಮವಿಶ್ವಾಸದಿಂದ ಓಡಾಡಬೇಕು ಎಂಬ ಕನಸನ್ನು ಅವರು ನನಸಾಗಿಸಿದ್ದಾರೆ ಎಂದು ಶಾಸಕ ಭರತ್ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.



ಒಮ್ಮೆ ಮುಚ್ಚುವ ಹಂತ ತಲುಪಿದ್ದ ಈ ಶಾಲೆ ಇಂದು 450ಕ್ಕೂ ಹೆಚ್ಚು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮಟ್ಟಕ್ಕೆ ಬೆಳೆಯಲು ರಘು ಸಾಲ್ಯಾನ್ ಹಾಗೂ ಹೇಮಲತಾ ಆರ್. ಸಾಲ್ಯಾನ್ ಅವರ ಸೇವಾ ಮನೋಭಾವವೇ ಕಾರಣವಾಗಿದೆ. ಶಾಲೆಯ ಹಿತದೃಷ್ಟಿಯಿಂದ ಇವರಿಬ್ಬರೂ ಶಿಕ್ಷಣ ತಜ್ಞರಿಗೆ ಕಡಿಮೆಯಿಲ್ಲದ ರೀತಿಯಲ್ಲಿ ಕೆಲಸ ಮಾಡುತ್ತಿದ್ದು, ಇತರರಿಗೆ ಮಾದರಿಯಾಗಿದ್ದಾರೆ ಎಂದು ಶಾಸಕರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಕೃಷ್ಣ ಪಾಲೆಮಾರ್, ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಇಂತಹ ಉತ್ತಮ ಸರ್ಕಾರಿ ಶಾಲೆ ವಿರಳ. ಬಡ ಮತ್ತು ಗ್ರಾಮೀಣ ವಲಯದ ಮಕ್ಕಳಿಗೆ ಇಲ್ಲಿ ಆದ್ಯತೆಯೊಂದಿಗೆ ಶಿಕ್ಷಣ ನೀಡಲಾಗುತ್ತಿದೆ. ಉಳ್ಳವರು ತಮ್ಮ ಊರಿನ ಶಾಲೆಗಳ ಅಭಿವೃದ್ಧಿಗೆ ನೆರವಾಗಬೇಕು. ಈ ಶಾಲೆ ಮುಂದಿನ ದಿನಗಳಲ್ಲಿ ಹೈಸ್ಕೂಲ್ ಹಾಗೂ ಪಿಯು ಕಾಲೇಜಾಗಿ ಬೆಳೆಯಲಿ ಎಂದು ಆಶಿಸಿದರು.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!