ಮಂಗಳೂರು ಜುಲೈ 01 : ನಗರದ ನಾಗುರಿ ಬಳಿ ಮನೆಯ ಮೇಲೆ ಧರೆ ಕುಸಿದು ಮೂವರ ಸಾವು ಮತ್ತು ಅಪಾರ ನಷ್ಟ ಸಂಭವಿಸಿದ್ದು ಸಂತ್ರಸ್ಥರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಡಿವೈಎಫ್ಐ ಒತ್ತಾಯಿಸಿದೆ.

ಮಂಗಳೂರು ನಗರದ ನಾಗುರಿ ಪ್ರದೇಶದಲ್ಲಿ ನಾಲ್ಕು ಮನೆಯ ಮೇಲೆ ಬಹುಗಾತ್ರದ ಧರೆ ಕುಸಿದ ಪರಿಣಾಮ ಮೂರು ಸಾವು ಸಂಭವಿಸಿ ಅಪಾರ ಹಾನಿಯುಂಟಾಗಿರುವ ಘಟನೆ ನಾಡಿನ ಜನರ ಮನವನ್ನು ಬೆಚ್ಚಿಬೀಳಿಸಿದೆ. ಈ ಘಟನೆಯಿಂದ ಪ್ರಾಣ ಕಳೆದು ಕೊಂಡ ಸಂತ್ರಸ್ತ ಕುಟುಂಬಗಳಿಗೆ ಗರಿಷ್ಟ ಪ್ರಮಾಣದ ಆರ್ಥಿಕ ಪರಿಹಾರ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಸಹಿತ ಸಂತ್ರಸ್ತರಿಗೆ ಮನೆ ನಿವೇಶನ ಒದಗಿಸಿಕೊಡಬೇಕೆಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ನಿಯೋಗ ಘಟನಾ ಸ್ಥಳಕ್ಕೆ ತೆರಳಿ ಸಂತ್ರಸ್ತರನ್ನು ಭೇಟಿ ನೀಡಿದ ವೇಳೆ ಸರಕಾರವನ್ನು ಆಗ್ರಹಿಸಿದೆ.
ಜಿಲ್ಲಾಡಳಿತ ಈ ಬಾರಿಯ ಮಳೆಗಾಲ ಎದುರಿಸುವ ಬಗ್ಗೆ ತೆಗೆದುಕೊಳ್ಳುವ ಮುನ್ಸೂಚನಾ ಕ್ರಮ, ಎಚ್ಚರಿಕೆಗಳೆಲ್ಲವೂ ಕೇವಲ ಪತ್ರಿಕಾ ಹೇಳಿಗೆಗಷ್ಟೇ ಸಿಮಿತಗೊಳಿಸಿದೆ ಹೊರತು ಜನರ ಬಳಿಗೆ ತೆರಳಲೇ ಇಲ್ಲ . ಅಂತಹ ಅಪಾಯಕಾರಿ ಪ್ರದೇಶಗಳನ್ನು ಗುರುತಿಸಿ ಜನರನ್ನು ಎಚ್ಚರಿಸುವ, ಬೇರೆಡೆಗೆ ಸ್ಥಳಾಂತರಿಸುವ ಅಗತ್ಯ ಕ್ರಮಗಳನ್ನು ಕೈಗೊಳ್ಳದೇ ಇರೋದು ಅತ್ಯಂತ ಬೇಜವಾಬ್ದಾರಿಯ ನಡೆ. ಈ ಹಿಂದೆ ಉತ್ತರಕನ್ನಡದ ಶಿರೂರು, ಕೇರಳದ ವಯನಾಡು ದುರಂತ ನಡೆದು ಅಪಾರ ಸಾವು ನೋವು ಸಂಭವಿಸಿದ ನಂತರ ಗುಡ್ಡ ಕುಸಿತ, ಇಳಿಜಾರು ಪ್ರದೇಶದ ಅಪಾಯಕಾರಿ ಮನೆಗಳನ್ನು ಗುರುತಿಸಿ ಸುರಕ್ಷಿತಾ ಸ್ಥಳಗಳಿಗೆ ತೆರಳಲು ಕ್ರಮಕೈಗೊಳ್ಳಬೇಕೆಂಬ ನಿರ್ದೇಶನವಿದ್ದರೂ ಈ ಕೆಲಸಗಳನ್ನು ಸರಕಾರ, ಜಿಲ್ಲಾಡಳಿತದ ಯಾವೊಂದು ಇಲಾಖೆಗಳು ಮಾಡದಿರುವುದು ಖಂಡನೀಯ. ಕಳೆದ ವರುಷ ಉಳ್ಳಾಲ ತಾಲೂಕಿನ ಹಲವು ಭಾಗಗಳಲ್ಲಿ ಈ ರೀತಿ ಗುಡ್ಡಕುಸಿತದಂತಹ ಘಟನೆ ನಡೆದು ಸಾವು ನೋವು ಸಂಭವಿಸಿರುವ ಘಟನೆಗಳ ಕಹಿ ನೆನಪುಗಳು ಇನ್ನೂ ಮಾಸಿಲ್ಲ. ಸರಕಾರಗಳು ಇದರಿಂದ ಎಚ್ಚರಗೊಳ್ಳಲೂ ಇಲ್ಲ. ನಗರದ ಸಾವಿರಾರು ಜನ ಸ್ವಂತ ಮನೆ ಇಲ್ಲದೆ ಈ ರೀತಿ ಅಪಾಯಕಾರಿ ಸ್ಥಳಗಳಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುವ ದಯನೀಯ ಪರಿಸ್ಥಿತಿ ಎದುರಾಗಿದ್ದರೂ ಸ್ಥಳೀಯ ಶಾಸಕರಿಗೆ, ಜನಪ್ರತಿನಿಧಿಗಳಿಗೆ ಜನ ಸಾಮಾನ್ಯರ ಬದುಕಿನ ಪ್ರಶ್ನೆಗಳ ಕಾಳಜಿಯೇ ಇಲ್ಲದಿರೋದು ದುರಂತ.
ಆದ್ದರಿಂದ ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ ನಾಗುರಿಯಲ್ಲಿ ಪ್ರಾಣವನ್ನು ಕಳೆದುಕೊಂಡ ಸಂತ್ರಸ್ತ ಕುಟುಂಬಗಳಿಗೆ ಗರಿಷ್ಟ ಪ್ರಮಾಣದ ಆರ್ಥಿಕ ಪರಿಹಾರ ಘೋಷಿಸಬೇಕು. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಯನ್ನು ಒದಗಿಸಿಕೊಡಬೇಕು. ಸಂತ್ರಸ್ತ ನಾಲ್ಕೂ ಕುಟುಂಬಗಳು ಬಾಡಿಗೆ ಮನೆ ವಾಸಿಗಳು ಆಗಿರೋದರಿಂದ ಸದ್ಯ ಕುಟುಂಬಗಳಿಗೆ ಉಳಿದುಕೊಳ್ಳಲು ಪರ್ಯಾಯಾ ಮನೆ ವ್ಯವಸ್ಥೆ ಹಾಗೂ ಮನೆ ನಿವೇಶನ ಒದಗಿಸಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಒತ್ತಾಯಿಸಿದೆ.
ಘಟನಾ ಸ್ಥಳಕ್ಕೆ ತೆರಳಿದ ನಿಯೋಗದಲ್ಲಿ ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಡಿವೈಎಫ್ಐ ಮುಖಂಡರಾದ ದೀಪಕ್ ಬಜಾಲ್, ಯಶ್ ರಾಜ್ ಬಜಾಲ್, ಜಗದೀಶ್ ಬಜಾಲ್, ಧಿರಾಜ್ ಪಕ್ಕಲಡ್ಕ ಉಪಸ್ಥಿತರಿದ್ದರು.