BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Bengaluru ಸಚಿವರ ಹೇಳಿಕೆ ನೆಪ ಮಾಡಿ ಬೀದಿಬದಿ ವ್ಯಾಪಾರಸ್ತರ ಮೇಲೆ ಅಧಿಕಾರಿಗಳಿಂದ ಬೆದರಿಕೆ ಖಂಡನೀಯ ; ಅಥಾವುಲ್ಲಾ ಜೋಕಟ್ಟೆ

ಬೆಂಗಳೂರು, ಜುಲೈ 01 : ಸಚಿವ ಕ್ರಷ್ಣ ಬೈರೇಗೌಡರ  ಹೇಳಿಕೆಯನ್ನು ನೆಪ ಮಾಡಿಕೊಂಡು ಬೀದಿ ವ್ಯಾಪಾರಿಗಳಿಗೆ ಬೆದರಿಕೆ ಹಾಕುತ್ತಿರುವ ಅಧಿಕಾರಿಗಳ ಕ್ರಮ ಖಂಡನೀಯ  ರಾಜ್ಯ ಎಸ್.ಡಿ.ಟಿ.ಯು ಹೇಳಿದೆ. 



 ನಗರದ ಪಾದಚಾರಿ ಮಾರ್ಗಗಳ ಸುರಕ್ಷತೆ ಹಾಗೂ ಸಾರ್ವಜನಿಕರ ಸುಗಮ ಸಂಚಾರದ ಬಗ್ಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ರವರು ವ್ಯಕ್ತಪಡಿಸಿರುವ ಕಾಳಜಿ ಸ್ವಾಗತಾರ್ಹ. ಆದರೆ, ಯಾವುದೇ ಅಧಿಕೃತ ಆದೇಶ ಹೊರಬೀಳುವ ಮುನ್ನವೇ ಸಚಿವರ ಹೇಳಿಕೆಯನ್ನು ನೆಪ ಮಾಡಿಕೊಂಡು ಜಿಬಿಎ ವ್ಯಾಪ್ತಿಯ ಮಹಾನಗರ ಪಾಲಿಕೆಗಳ ಅಧಿಕಾರಿಗಳು ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸುವುದಾಗಿ ಬೆದರಿಕೆ ಹಾಕುತ್ತಿರುವುದು ಅತ್ಯಂತ ಖಂಡನೀಯ ಎಂದು ಎಸ್.ಡಿ.ಟಿ.ಯು ಕರ್ನಾಟಕ ರಾಜ್ಯಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ತಿಳಿಸಿದ್ದಾರೆ.


ರಾಜ್ಯದಲ್ಲಿ, ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಲಕ್ಷಾಂತರ ಕುಟುಂಬಗಳು ಬೀದಿ ವ್ಯಾಪಾರವನ್ನೇ ಜೀವನೋಪಾಯವಾಗಿ ಅವಲಂಬಿಸಿವೆ. ಸುಮಾರು 2 ಲಕ್ಷಕ್ಕೂ ಅಧಿಕ ಬೀದಿ ವ್ಯಾಪಾರಿಗಳು ಮಹಾನಗರ ಪಾಲಿಕೆಗಳ ಸಮೀಕ್ಷೆಗೆ ಒಳಗಾಗಿದ್ದು, ಕೇಂದ್ರ ಸರ್ಕಾರದ 'ಪಿಎಂ ಸ್ವನಿಧಿ' ಯೋಜನೆಯಡಿ ಸಾಲ ಸೌಲಭ್ಯ ಪಡೆದಿದ್ದಾರೆ. ಅಲ್ಲದೆ, ಮಾನ್ಯತೆ ಪಡೆದ ಕಾರ್ಮಿಕ ಸಂಘಗಳ ನೋಂದಾಯಿತ ಸದಸ್ಯರಾಗಿದ್ದಾರೆ. ಇಂತಹ ವ್ಯಾಪಾರಿಗಳು ಯಾವುದೇ ರೀತಿಯ ಒತ್ತುವರಿದಾರರಲ್ಲ. ಅವರು ಬೀದಿ ವ್ಯಾಪಾರಿಗಳ (ಜೀವನೋಪಾಯ ರಕ್ಷಣೆ ಹಾಗೂ ಬೀದಿ ವ್ಯಾಪಾರದ ನಿಯಂತ್ರಣ) ಕಾಯಿದೆ–2014ರಡಿ ಕಾನೂನುಬದ್ಧ ಹಕ್ಕು ಹೊಂದಿರುವ ಸಾರ್ವಜನಿಕ ಸ್ಥಳಗಳ ಬಳಕೆದಾರರಾಗಿದ್ದಾರೆ.

ಈ ಕಾಯಿದೆಯ ಪ್ರಕಾರ, ಯಾವುದೇ ಬೀದಿ ವ್ಯಾಪಾರಿಯನ್ನು ಏಕಾಏಕಿ ತೆರವುಗೊಳಿಸಲು ಅಥವಾ ಅವರ ಜೀವನೋಪಾಯಕ್ಕೆ ಧಕ್ಕೆ ಉಂಟುಮಾಡಲು ಅವಕಾಶವಿಲ್ಲ. 


ಪಟ್ಟಣ ವ್ಯಾಪಾರ ಸಮಿತಿ (Town Vending Committee)ಯ ಶಿಫಾರಸು, ಸಮೀಕ್ಷೆ ಹಾಗೂ ಕಾನೂನುಬದ್ಧ ಪ್ರಕ್ರಿಯೆ ಪೂರ್ಣಗೊಳಿಸದೆ ಯಾವುದೇ ಕ್ರಮ ಕೈಗೊಳ್ಳುವುದು ಕಾನೂನುಬಾಹಿರವಾಗಿದೆ.

ಸಚಿವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಅಧಿಕಾರಿಗಳು ಬೀದಿ ವ್ಯಾಪಾರಿಗಳಲ್ಲಿ ಆತಂಕ ಸೃಷ್ಟಿಸುವ ಬದಲು, ಪಾದಚಾರಿಗಳ ಸುರಕ್ಷತೆ ಮತ್ತು ಬೀದಿ ವ್ಯಾಪಾರಿಗಳ ಜೀವನೋಪಾಯ ಎರಡನ್ನೂ ಸಮತೋಲನದಿಂದ ಕಾಪಾಡುವ ಪರಿಹಾರ ರೂಪಿಸಬೇಕು. ಸರ್ಕಾರವು ಕಾಯಿದೆಯ ಆತ್ಮಕ್ಕೆ ಅನುಗುಣವಾಗಿ ನಡೆದು ಬೀದಿ ವ್ಯಾಪಾರಿಗಳ ಹಕ್ಕುಗಳನ್ನು ಗೌರವಿಸಬೇಕು.


ಬೀದಿ ವ್ಯಾಪಾರಿಗಳ ಮೇಲೆ ಅನಗತ್ಯ ದೌರ್ಜನ್ಯ, ಬೆದರಿಕೆ ಮತ್ತು ಬಲವಂತದ ತೆರವು ಕಾರ್ಯಾಚರಣೆಗಳನ್ನು ಸರ್ಕಾರ ತಕ್ಷಣವೇ ನಿಲ್ಲಿಸಬೇಕು. ಬೀದಿ ಬದಿ ವ್ಯಾಪಾರಿಗಳ ಸಂಘಟಿತ  ಪ್ರಬಲ ಹೋರಾಟ  ಎದುರಿಸುವ ಮೊದಲು ಸರಕಾರ ಎಚ್ಚೆತ್ತುಕೊಳ್ಳಬೇಕು ಎಂದು ಎಸ್.ಡಿ.ಟಿ.ಯು ರಾಜ್ಯಾಧ್ಯಕ್ಷರಾದ ಅಥಾವುಲ್ಲಾ ಜೋಕಟ್ಟೆ ರಾಜ್ಯ ಸರಕಾರವನ್ನು ಎಚ್ಚರಿಸಿದ್ದಾರೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!