ಮಂಗಳೂರು,ಅ.02: ಮಂಗಳೂರು ನಗರದ ಜಿಲ್ಲಾ ಕಾರಾಗೃಹದಲ್ಲಿ 2015ರಲ್ಲಿ ನಡೆದಿದ್ದ ಕುಖ್ಯಾತ ರೌಡಿ ಮಾಡೂರು ಯೂಸುಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಪೂರ್ಣಗೊಳಿಸಿರುವ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಐವರು ಆರೋಪಿಗಳನ್ನು ದೋಷಿಗಳೆಂದು ತೀರ್ಮಾನಿಸಿದ್ದು, ಜೀವಾವಧಿ ಶಿಕ್ಷೆ ಹಾಗೂ ಒಟ್ಟು ₹76,000 ದಂಡ ವಿಧಿಸಿ ತೀರ್ಪು ನೀಡಿದೆ. ನ್ಯಾಯಾಧೀಶ ಜಗದೀಶ್ ವಿ.ಎನ್. ಅವರು ಈ ಶಿಕ್ಷೆ ಪ್ರಕಟಿಸಿದ್ದಾರೆ.
ಸುರತ್ಕಲ್‌ನ ಲಿಗೇಶ್ ಪೂಜಾರಿ ಅಲಿಯಾಸ್ ಲಿತ್ತು, ಶೋಭರಾಜ್ ಅಲಿಯಾಸ್ ಶೋಭಿ, ಯುವರಾಜ್, ಉಳಾಯಿಬೆಟ್ಟುವಿನ ಪ್ರದೀಪ್ ಹಾಗೂ ಸುಳ್ಯದ ಉಮೇಶ್ ಕೊಂಬಾರ್ ಅಲಿಯಾಸ್ ಉಮೇಶ್ ಕುಂಬಾರ ಶಿಕ್ಷೆಗೆ ಗುರಿಯಾದ ಅಪರಾಧಿಗಳು.
ಘಟನೆಯ ಹಿನ್ನೆಲೆ:
ದಿನಾಂಕ 02-11-2015ರಂದು ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಎರಡು ಕೈದಿಗಳ ಗುಂಪುಗಳ ನಡುವೆ ಮಾರಣಾಂತಿಕ ಘರ್ಷಣೆ ನಡೆದಿತ್ತು. ಈ ವೇಳೆ ಮಾಡೂರು ಯೂಸುಫ್ ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ಭೀಕರ ಹಲ್ಲೆ ನಡೆಸಲಾಗಿದ್ದು, ಗಂಭೀರವಾಗಿ ಗಾಯಗೊಂಡ ಆತ ಸ್ಥಳದಲ್ಲೇ ಅಸುನೀಗಿದ್ದ. ಈ ಘಟನೆಗೆ ಸಂಬಂಧಿಸಿದಂತೆ ಬರ್ಕೆ ಪೊಲೀಸ್ ಠಾಣೆಯಲ್ಲಿ (ಅ.ಕ್ರ 92/2015) ಐಪಿಸಿ ಕಲಂ 143, 144, 147, 148, 324, 326, 353, 332, 307, 302, 120(B), 37 ಹಾಗೂ 149 ರಡಿ ಪ್ರಕರಣ ದಾಖಲಾಗಿತ್ತು.
ಅಂದಿನ ಮಂಗಳೂರು ಕೇಂದ್ರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾಗಿದ್ದ (ACP) ತಿಲಕ್ ಚಂದ್ರ ಅವರು ಪ್ರಕರಣದ ಸಮಗ್ರ ತನಿಖೆ ನಡೆಸಿ, ಬಲವಾದ ಸಾಕ್ಷ್ಯಾಧಾರಗಳೊಂದಿಗೆ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದರು. ಸರ್ಕಾರದ ಪರವಾಗಿ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕ ಬಿ. ಮೋಹನ್ ಕುಮಾರ್ ಅವರು ವಾದ ಮಂಡಿಸಿದ್ದರು. ಸುದೀರ್ಘ ವಿಚಾರಣೆಯ ಬಳಿಕ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಐವರಿಗೂ ಕಠಿಣ ಶಿಕ್ಷೆ ಪ್ರಕಟಿಸಿದೆ.