BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
[ಹೋಮ್] ತಿಂಗಳ ಪಾಪ್ಯುಲರ್ ಸುದ್ದಿಗಳು

Udupi cyber crime ಉಡುಪಿ ಜಿಲ್ಲೆಯಲ್ಲಿ ಎರಡು ಆನ್‌ಲೈನ್ ವಂಚನೆ ಪ್ರಕರಣಗಳು ಬೆಳಕಿಗೆ, ಬರೋಬ್ಬರಿ 74.29 ಲಕ್ಷ ರೂ. ಗುಳುಂ..!


ಉಡುಪಿ, ಜುಲೈ20: ಉಡುಪಿ ಜಿಲ್ಲೆಯಲ್ಲಿ ಎರಡು ಆನ್‌ಲೈನ್ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿದ್ದು ಇಬ್ಬರು ವಯೋ ವೃದ್ದರು ಬರೋಬ್ಬರಿ 74.29 ಲಕ್ಷ ರೂಪಾಯಿಗಳನ್ನು ಕಳಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಠಾಣೆ ಮತ್ತು ಸೆನ್ ಪೊಲಿಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

 ಪ್ರಕರಣ 1:  ಉಡುಪಿಯ ವಾಸುದೇವ ಪ್ರಭು (76) ಎಂಬವರನ್ನು ಡಿಜಿಟಲ್ ಅರೆಸ್ಟ್ ಮಾಡುವ ಬೆದರಿಕೆ ಮಾಡಿ 9,29,000ರೂ.ಗಳನ್ನು ವಂಚಿಸಿದ್ದಾರೆ. ಪ್ರಭು ಅವರಿಗೆ ಜು.2ರಂದು ವಾಟ್ಸಪ್ ಕರೆ ಮಾಡಿದ ವಂಚಕರು, ಪ್ರಭು ಹೆಸರಿನಲ್ಲಿ ಇನ್ನೊಂದು ಖಾತೆ ತೆರೆದು ಅದರಲ್ಲಿ 2 ಕೋಟಿ ರೂ.ಮನಿ ಲಾಂಡರಿಂಗ್ ಆಗಿದ್ದು, ಈ ಬಗ್ಗೆ ಇಡಿ ಕೇಸು ದಾಖಲಿಸಿ ಬಂಧಿಸಲು ಬರುತ್ತಿದೆ. ಮುಂಬಯಿಗೆ ಕರೆದೊಯ್ದು 45 ದಿನ ಪೊಲೀಸ್ ಕಸ್ಟಡಿಯಲ್ಲಿರಿಸುತ್ತೇವೆ ಎಂದು ಬೆದರಿಸಿದ್ದರು. ಅವರ ಬೆದರಿಕೆಗೆ ಮಣಿದು ಅವರು ಹೇಳಿದ ಖಾತೆಗೆ 9.29 ಲಕ್ಷ ರೂ.ಗಳನ್ನು ಪ್ರಭು ಅವರು ವರ್ಗಾಯಿಸಿಕೊಂಡಿದ್ದರು. ಇದೀಗ ವಂಚನೆಗೊಳಗಾದ ಪ್ರಭು ಅವರು ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಪ್ರಕರಣ 2 : ಮತ್ತೊಂದು ಪ್ರಕರಣದಲ್ಲಿ ಮುಂಬಯಿ ಪೊಲೀಸ್ ಡಿಪಾರ್ಟ್‌ಮೆಂಟ್ ನಿಂದ ಎಂದು ಹೇಳಿ ವಾಟ್ಸಪ್ ಮೆಸೇಜ್, ವಿಡಿಯೋ ಕಾಲ್ ಮೂಲಕ ಉಡುಪಿಯ ಮಹಿಳೆಯೊಬ್ಬರನ್ನು ಬೆದರಿಸಿದ ಆನ್‌ಲೈನ್ ವಂಚಕರು ಮಹಿಳೆಯ ಬ್ಯಾಂಕ್ ಖಾತೆಯಲ್ಲಿದ್ದ 65,00,000ರೂ. ಗಳನ್ನು ಬಲವಂತವಾಗಿ ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಉಡುಪಿಯ ಶೀಲಾ (66) ಎಂಬವರಿಗೆ ಜು.13ರಂದು ಮುಂಬಯಿಯ ಪೊಲೀಸ್ ಇಲಾಖೆಯಿಂದ ಎಂದು ವಾಟ್ಸಪ್ ಸಂದೇಶವೊಂದು ಬೆಳಗ್ಗೆ 10 ಗಂಟೆಗೆ ಬಂದಿದ್ದು, ನಂತರ ಅದೇ ನಂಬರ್‌ನಿಂದ ವಿಡಿಯೋ ಕಾಲ್ ಮಾಡಿದ ಪೊಲೀಸ್ ಸಮವಸ್ತ್ರದಲ್ಲಿದ್ದ ವ್ಯಕ್ತಿ, ತಾನು ಕೊಲಬಾ ಠಾಣೆಯ ಇನ್‌ಸ್ಪೆಕ್ಟರ್ ಎಂದು ಪರಿಚಯಿಸಿಕೊಂಡು ಮನೆಯಲ್ಲಿ ಆಕೆ ಒಬ್ಬಳೇ ಇರುವುದನ್ನು ಖಚಿತ ಪಡಿಸಿಕೊಂಡು, ನಿಮ್ಮ ಕೆನರಾ ಬ್ಯಾಂಕ್ ಖಾತೆಗೆ 20 ಕೋಟಿ ರೂ. ಅಕ್ರಮ ಹಣ ಜಮಾ ಆಗಿದ್ದು ಕೇಸ್ ಆಗಿ ವಾರಂಟ್ ಹೊರಡಿಸಲಾಗಿದೆ.  ಮಂಗಳೂರು ಪೊಲೀಸರು ನಿಮ್ಮನ್ನು ಅರೆಸ್ಟ್ ಮಾಡಲು ಬರುತ್ತಿರುವುದಾಗಿ ಹೆದರಿಸಿದ್ದಾನೆ. ಇದರಿಂದ ಬೆದರಿದ ಆಕೆಯಿಂದ ಆಕೆಯ ಎಲ್ಲಾ ಬ್ಯಾಂಕ್‌ಗಳ ಅಕೌಂಟ್ ವಿವರ ಪಡೆದು ಅವುಗಳ ಪೋಟೊ ತೆಗೆಸಿಕೊಂಡು, ಕೇಸ್‌ನಿಂದ ಹೊರಬರಲು ನಾವು ಹೇಳಿದ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವಂತೆ ತಿಳಿಸಿದ್ದಾನೆ. ಜು.13ರಿಂದ 17ರವರೆಗೆ ಮಹಿಳೆ ಅವರು ನೀಡಿದ ಬ್ಯಾಂಕ್ ಖಾತೆಗೆ ತನ್ನ ಖಾತೆಯಲ್ಲಿರುವ ಒಟ್ಟು 65 ಲಕ್ಷ ರೂ.ಗಳನ್ನು ವರ್ಗಾಯಿಸಿದ್ದರು. ಇದೀಗ ತಾನು ವಂಚನೆಗೊಳಗಾಗಿರುವುದನ್ನು ತಿಳಿದ ಶೀಲಾ (66) ಅವರು ಉಡುಪಿ ಸೆನ್ ಅಪರಾಧ ಠಾಣೆಯಲ್ಲಿ ಐಟಿ ಆ್ಯಕ್ಟ್ ಪ್ರಕಾರ ಪ್ರಕರಣ ದಾಖಲಿಸಿದ್ದಾರೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!