BREAKING
ರಾಜ್ಯ
ದೇಶ
ವಿದೇಶ
ಕ್ರೀಡೆ
ಸಿನಿಮಾ
ಉಡುಪಿ
ದೇಶ

ಮಲೆನಾಡಿನಲ್ಲಿ ವ್ಯಾಪಕ ಮಳೆ, ಮತ್ತೆ ಮರುಕಳಿಸಿದ ಜೋಗದ ವೈಭವ ನೋಡಲು ಪ್ರವಾಸಿಗರ ದಂಡು

ಶಿವಮೊಗ್ಗ, ಜುಲೈ 06: ಮಲೆನಾಡು ಭಾಗದಲ್ಲಿ ಕಳೆದ ಕೆಲ ದಿನಗಳಿಂದ ವ್ಯಾಪಕ ಮಳೆಯಾಗುತ್ತಿದ್ದು ಪ್ರಮುಖ ನದಿಗಳು ಮೈದುಂಬಿ ಹರಿಯುತ್ತಿವೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಮತ್ತೆ ರಾಜಕಳೆ ಬಂದಿದೆ.





ಜೂನ್ ತಿಂಗಳು ಪೂರ್ತಿ ಕೈಕೊಟ್ಟ ಮುಂಗಾರು ಜುಲೈ ಆರಂಭವಾಗುತ್ತಿದ್ದಂತೆ ಚುರುಕುಗೊಂಡಿದೆ. ಮಲೆ ನಾಡಿನಲ್ಲಿ ನದಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಕೃಷಿ ಚಟುವಟಿಕೆಗಳು ಬಿರುಸಿನಿಂದ ಆರಂಭವಾಗಿದೆ. ಶಿವಮೊಗ್ಗದ ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದೆ. ರಾಜ, ರಾಣಿ, ರೋರರ್, ರಾಕೆಟ್ ಭೋರ್ಗರೆಯುತ್ತ ಧುಮ್ಮಿಕ್ಕುತ್ತಿವೆ. ಈ ಅದ್ಭುತ ರಮಣೀಯ ದೃಶ್ಯವನ್ನು ಕಣ್ಣುಂಬಿಕೊಳ್ಳಲು ಪ್ರವಾಸಿಗರ ದಂಡೇ ಈ ಕಡೆಗೆ ಹರಿದುಬರುತ್ತಿದೆ. ರುದ್ರ ರಮಣೀಯ ಜಲಪಾತದ ಹತ್ತಿರ ಹೋಗುವುದನ್ನು ಜಿಲ್ಲಾಡಳಿತ ನಿಷೇಧಿಸಿದೆ. ಕಳೆದ ವಾರ ಜಲಪಾತ ಬಳಿ ತೆರಳಿ ಅಪಾಯಕಾರಿ ವಿಡಿಯೋ ಚಿತ್ರೀಕರಣ ಮಾಡಿದ್ದ ಮೂವರ ಮೇಲೆ FIR ದಾಖಲಾಗಿದೆ.



ತೀರ್ಥಹಳ್ಳಿಯ ಮೂವರು ಯುವಕರ ವಿರುದ್ಧ ಉತ್ತರ ಕನ್ನಡದ ಸಿದ್ದಾಪುರ ಪೊಲೀಸ್ ಸ್ಟೇಷನ್‌ನಲ್ಲಿ ಎಫ್‌ಐಆರ್ ದಾಖಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕು ವ್ಯಾಪ್ತಿಗೆ ಜೋಗ ಜಲಪಾತದ ರಾಜಾ ಫಾಲ್ಸ್‌ ಸೇರುತ್ತದೆ. ಈ ಪ್ರದೇಶ ತುಂಬಾ ಅಪಾಯಕಾರಿ. ಹಾಗಾಗಿ ಅಲ್ಲಿಗೆ ತೆರಳಲು ಯಾರಿಗೂ ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ವಿಡಿಯೋ ಚಿತ್ರೀಕರಿಸಿ, ಸಾಮಾಜಿಕ ಜಾಲ ತಾಣಗಳಲ್ಲಿ ವಿಡಿಯೋ ಹರಿಬಿಟ್ಟ ಆರೋಪದ ಮೇರೆಗೆ ತೀರ್ಥಹಳ್ಳಿಯ ಮೂವರು ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ. ಇಂತಹ ವಿಡಿಯೋಗಳನ್ನು ವೀಕ್ಷಿಸುವ ಇತರೆ ಪ್ರವಾಸಿಗರು ಸಹ ಅಪಾಯಕಾರಿ ಸಾಹಸಗಳಿಗೆ ಪ್ರೇರೇಪಿತರಾಗುವ ಸಾಧ್ಯತೆ ಇರುವುದರಿಂದ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!