ಮಂಗಳೂರು, ಜುಲೈ 09: ರಜೆ ಮೇಲೆ ಊರಿಗೆ ಬಂದಿದ್ದ CISF ಯೋಧನೊಬ್ಬರು ಮಂಗಳೂರಿನಲ್ಲಿ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಕೊಯಿಲ ಗ್ರಾಮದ ಪುತ್ಯೆ ನಿವಾಸಿ ಸೀತಾರಾಮ ಗೌಡ ಮೃತಪಟ್ಟ ಯೋಧರಾಗಿದ್ದಾರೆ.
ಮಂಗಳೂರಿನ ಕೆಪಿಟಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡದ್ದಿ ಸೀತಾರಾರನ್ನು ಆಸ್ಪತ್ರೆಗೆ ದಾಖಲು ಮಾಡುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ.
CISF ನಲ್ಲಿ ಸೇವೆ ಸಲ್ಲಿಸುತ್ತಿರುವ ಸೀತಾರಾಮ ಗೌಡರವರು ಪ್ರಸ್ತುತ ಜಮ್ಮುವಿನ ಸೆಂಟ್ರಲ್ ಜೈಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜುಲೈ 3ರಂದು ಅವರು ರಜೆಯ ನಿಮಿತ್ತ ಊರಿಗೆ ಬಂದಿದ್ದರು. ಜುಲೈ 7ರಂದು ಕೆಲವು ಅಧಿಕೃತ ಎಸ್.ಐ.ಆರ್ (S.I.R) ದಾಖಲಾತಿಗಳನ್ನು ನೀಡುವ ಸಲುವಾಗಿ ಅವರು ಕಡಬ ತಾಲೂಕಿನ ಕೊಯಿಲದ ಊರು ಮನೆಗೆ ಹೋಗಿದ್ದರು.
ಜುಲೈ 8ರ ಬುಧವಾರದಂದು ಸೀತಾರಾಮ ಗೌಡರವರು ತಮ್ಮ ಬೈಕ್ ಚಲಾಯಿಸಿಕೊಂಡು ಕೊಯಿಲದ ಮನೆಯಿಂದ ಹೊರಟು ಮಂಗಳೂರಿಗೆ ಬಂದಿದ್ದರು. ಸಂಜೆ ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ 66 ರ ಕೆಪಿಟಿ ಬಳಿ ಅಪಘಾತ ಸಂಭವಿಸಿದೆ.
ಅಪಘಾತದ ತೀವ್ರತೆಗೆ ತೀವ್ರ ರಕ್ತಸ್ರಾವ ಹಾಗೂ ಗಂಭೀರ ಗಾಯಗೊಂಡಿದ್ದ ಸೀತಾರಾಮ ಗೌಡರನ್ನು ತಕ್ಷಣವೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಆಸ್ಪತ್ರೆಗೆ ತಲುಪುವ ಮುನ್ನವೇ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಆದ್ರೆ ಅಪಘಾತ ಬೈಕ್ ಸ್ಕಿಡ್ ಆಗಿ ಸಂಭವಿಸಿದೆಯೋ ಅಥವಾ ಅಪರಿಚಿತ ವಾಹನ ಹೊಡೆದು ಪರಾರಿಯಾಗಿದೆಯೋ ಸ್ಪಷ್ಟವಾಗಿಲ್ಲ.
ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹದ ಮಹಜರು ಪ್ರಕ್ರಿಯೆ ನಡೆಸಿ ತನಿಖೆ ಮುಂದುವರಿಸಿದ್ದಾರೆ. ಹೆದ್ದಾರಿಯ ಆಸುಪಾಸಿನ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪರಿಶೀಲಿಸಿ ಅಪಘಾತದ ನಿಖರ ಕಾರಣವನ್ನು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ.